Friday, November 7, 2008

ನನಗಾದ ಆಘಾತ !!

ಎಸ್ಟೋ ಸಾರಿ ನಾನು ಅನ್ಕೊತಾ ಇದ್ದೆ ಕನ್ನಡದಲ್ಲಿ ನನ್ನ ಮನಸ್ಸಿನ ಮಾತುಗಳನ್ನು ಬರೀಬೇಕು ಅಂತ ... ಆದ್ರೆ ಬರಿಯೋಕೆ ಸುಲಭವಾಗಿ ಉಪಯೋಗಿಸೋ ಸಾಫ್ಟ್ವೇರ್ ಸಿಕ್ಕಿರಲಿಲ್ಲ. ಕೊನೆಗೆ ಒಂದು ದಿನ ಸಿಕ್ಕಿದ್ದು ಗೂಗಲ್ ನವರ "http://www.google.co.in/transliterate/indic/kannada". ನನಗೆ ಯಾಕೋ ಬೇರೆ ಸಾಫ್ಟ್ವೇರ್ ಕಿಂತ ಇದೆ ಹೆಚ್ಚು ಇಸ್ಟ ಆಯಿತು. ಆದರೆ ಏನ್ ಬರಿಯೋದು ?? .....ಸರಿ ನಾನು ಮೊದ್ಲೇ ಬರ್ದಿರೋ ಇಂಗ್ಲಿಷ್ ಬ್ಲಾಗ್ ಎಲ್ಲ ನನ್ನ ಸ್ವಂತ ಅನುಭವಗಳು ...ಇದು ಕೂಡ ಯಾಕೆ ನನ್ನ ಸ್ವಂತ ಅನುಭವಾನೆ ಆಗಬಾರದು ?

ದಯವಿಟ್ಟು ತಪ್ಪುಗಳು ಇದ್ರೆ ಕ್ಷಮಿಸಿರೀ ....ತಿದ್ದಿರಿ :-)

ಹಾಗಾದ್ರೆ ನನ್ನ ಜೊತೆ ನಡೆದ, ನನ್ನ ಮನಸ್ಸಿಗೆ ಆದ ಈವರೆಗಿನ ಅತ್ಯಂತ ಆಘಾತಕರ ಘಟನೆ ನಿಮ್ಮ ಮುಂದೆ ಇಡುತಿದ್ದೇನೆ. ಇದು ನಡದಿದ್ದು ಇಂದಿನಿಂದ ಸುಮಾರು ೫-೬ ವರ್ಷದ ಹಿಂದೆ, ನಮ್ಮ ಹಳ್ಳಿ ಚೆಳ್ಳಗುರ್ಕಿ, ಬಳ್ಳಾರಿ ಇಂದ ಸುಮಾರು ೨೦ - ೨೫ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಶ್ರೀ. ಏರಿಸ್ವಾಮಿಯವರ ಜೀವ ಸಮಾಧಿ ಇದೆ. ಎಲ್ಲರೂ ಸ್ವಾಮಿಯವರನ್ನು ಏರಿತಾತ ಎಂದು ಪ್ರೀತಿಯಿಂದ ಕರಿತಾರೆ. ತಾತನವರಿಗೆ ಇಲ್ಲಿ ಭವ್ಯವಾದ ಮಠವನ್ನು ನಿರ್ಮಿಸಿದ್ದಾರೆ. ಈ ಮಠಕ್ಕೆ ಸುಮಾರು ೧೦೦ ವರ್ಷದ ಇತಿಹಾಸ ಇದೆ....ಹಾಗು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಇಲ್ಲಿ ತಾತನವರ ಜಾತ್ರೆ ನಡಿಯುತ್ತೆ. ಜಾತ್ರೆಗೆ ಸುಮಾರು ೨೦ ರಿಂದ ೨೫ ಸಾವಿರ ಜನ ಸೇರ್ತಾರೆ. ನನ್ನ ತಾತ ಅಂದರೆ ನಮ್ಮ ಅಪ್ಪನವರ ಅಪ್ಪ, ಊರಿನ ಗೌಡರು. ಹಾಗಾಗಿ ಮೊದಲಿನಿಂದಲೂ ಜಾತ್ರೆ ಶುರುವಾಗೋದು ನಮ್ಮ ಮನೆಯಿಂದ, ನಮ್ಮ ಮನೆಯ ಮುತ್ತೈದೆಯರು ಮಂಗಳಾರತಿ ಹಾಗು ಪ್ರಸಾದ ಸಿದ್ಧಪಡಿಸಿ ನಮ್ಮ ಮನೆಯಿಂದ ಮೆರವಣಿಗೆಯಲ್ಲಿ ಮಠಕ್ಕೆ ಹೋಗಿ ತತಾನವರಿಗೆ ಪ್ರಸಾದ ಅರ್ಪಿಸಿ ತೇರು ಎಳಿಯೊಕೆ ಶುರು ಮಾಡುತಿದ್ದರು.

ಈ ವರ್ಷ ತೇರಿನ ೭೫ ನೆ ವಾರ್ಷಿಕೋತ್ಸವ....ಹಾಗಾಗಿ ಈ ವರ್ಷ ಬಹಳ ವಿಶೇಷ ವಾಗಿ ಲಕ್ಷ ದೀಪೋತ್ಸವ ಹಾಗು ಇನ್ನು ಹಲವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಮೈಸೂರಿನ ಶ್ರೀ. ಸತ್ತೂರು ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಯವರನ್ನು ಕರಿಸಲಾಗಿತ್ತು. ಇನ್ನು ೭೫ ವರ್ಷ ಹಳೆಯದಾದ ತೇರು ಮುರುಕಾಗಿದ್ರು ಭವ್ಯವಾಗಿ ಅಲಂಕಾರ ಗೊಂಡು ರಾರಾಜಿಸುತ್ತಿತ್ತು. ನಮ್ಮ ಮನೆಯಿಂದ ಮೆರವಣಿಗೆ ಹೊರಟು ಮಠ ತಲುಪಿತು. ಏರಿತಾತನವರ ಮೂರ್ತಿಯನ್ನು ಮಠದಿಂದ ಕರೆತಂದು ತೇರಿನಲ್ಲಿ ಕೂರ್ಸಿದ್ರು. ಮತ್ತೆ ತೇರಿನ ಸುತ್ತ ೩ ಪ್ರದಕ್ಷಿಣೆ ಹಾಕಿದ ಮೇಲೆ ಕುಂಬಳಕಾಯಿ ಅರ್ಪಿಸಿ ಏರಿತಾತ ನವರಿಗೆ ಜೈ ಕಾರ ಹಾಕಿ ಭಕ್ತರು ತೇರನ್ನು ಎಳಿಯೋಕೆ ಶುರು ಮಾಡಿದ್ರು. ತೇರಿನ ಹಿಂದೆ ನಮ್ಮ ಮನೆಯವರು ಮಂಗಳಾರತಿ ಹಿಡಿದು ಹೋಗೋದು ಪದ್ಧತಿ ...ಈ ಸಾರಿ ನನ್ನ ಅಮ್ಮ, ದೊಡ್ಡಮ್ಮ ಹಾಗು ಚಿಕ್ಕಮ್ಮ ಹಾಗು ಇನ್ನು ನಮ್ಮ ಮನೆಯವರೆಲ್ಲ ಇದ್ರೂ.

ನನಗೆ, ನಮ್ಮ ಅಣ್ಣಂದಿರು ತಮ್ಮಂದಿರು ಅಕ್ಕ ತಂಗಿ ಎಲ್ಲರಿಗೂ ತೇರಿನ ಹಿಂದೆ ಹೋಗೋದು ಅಂದರೆ ಬಹಳ ಇಷ್ಟ. ತೇರು ಶುರುವಾದ ಮೇಲೆ ಭಕ್ತರು ದೇವರಿಗೆ ಬಾಳೆಹಣ್ಣು ಅರ್ಪಿಸೋಕೆ ಎಸಿತಾರೆ ...ಅದನ್ನು ತೇರಿನ ಹಿಂದೆ ನಿಂತು ಹಿಡಿಯೋದು ನಮಗೆ ಒಂದು ಆಟ :-) ...ಒಂದು ರೀತಿ ಬಾಳೆ ಹಣ್ಣಿನ ಮಳೇನೆ ಸರಿ. ತೇರು ಊರ ಹೊರಗಿನ ದೇವಸ್ಥಾನ ಮುಟ್ಟಿ ಹಿಂದಿರುಗುತ್ತಿತ್ತು. ನಾವೆಲ್ಲ ಹುಡುಗರು ದೇವಸ್ಥಾನ ಮುಟ್ಟಿದ ಮೇಲೆ ಮನೆ ಗೆ ಹೋಗಿ ಮುಂದಿನ ಕಾರ್ಯಕ್ರಮಕ್ಕೆ ತಯಾರಿ ನಡಿಸ್ತಾ ಇದ್ವಿ. ನಮ್ಮ ಹಿರಿಯರೆಲ್ಲ ತೆರಿನಿಂದ ದೇವರನ್ನು ಇಳಿಸಿ ಮತ್ತೆ ಮಠದಲ್ಲಿ ಕೂರಿಸಿ ಬರಬೇಕು.

ತೇರು ದೇವಸ್ಥಾನ ಮುಟ್ಟಿತು ನಾನು ನಮ್ಮ ಅಣ್ಣ ತಮ್ಮಂದಿರ ಜೊತೆ ಮನೆ ಕಡೆ ಹೊರಟ್ವಿ. ನಮ್ಮ ಮನೆ ಅಲ್ಲಿಂದ ದೂರ ಏನು ಇಲ್ಲ ...ನಾವೆಲ್ಲ ಹರಟೆ ಹೊಡ್ಕೊಂಥ ಹಾಗೆ ಇನ್ನೇನು ಮನೆ ಮುಟ್ಟುತಾ ಇದ್ವಿ ಅಸ್ಟರಲ್ಲಿ ಎಲ್ಲಿಂದಲೋ ಜೋರಾಗಿ ಜನರ ಆಹಾಕಾರ ಕೇಳಿಸ್ತು. ತೇರು ಬಹುಶಃ ಹಿಂದಿರಿಗ್ತಾ ಇರ್ಬೇಕು ಅನ್ಕೊಂಡು ನುಮ್ಮನೆ ಮುಂದೆ ನಡಿದ್ವಿ. ಅಸ್ಟರಲ್ಲಿ ಕೆಲ ಹುಡುಗರು ತೇರಿನ ಕಡೆ ಇಂದ ಚೀರಾಡ್ತಾ ಓಡಿ ಬರೋದು ಕೇಳಿಸ್ತು. ಹತ್ರ ಬಂದು ಅವರು "ತೇರು ಬಿತ್ತು ತೇರು ಬಿತ್ತು" ಅಂತ ಹೇಳಿ ಓಡ್ತಾನೆ ಮುಂದೆ ಹೋದ್ರು. ನಮಗೆಲ್ಲ ಆಶ್ಚರ್ಯ ಹಾಗು ಆತಂಕ ಶುರುವಾಯಿತು. ನಮ್ಮ ಹಿರಿಯರೆಲ್ಲ ತೇರಿನ ಹಿಂದೆ ಇರ್ತಾರೆ ...೨೫-೩೦ ಅಡಿ ಎತ್ರದ ತೇರು ಯಾವಕಡೆ ಬಿದ್ದಿದಿಯೋ ಏನೋ ಗೊತ್ತಿಲ್ಲ. ನಾವೆಲ್ಲ ಅಂದು ಓಡಿದ ರೀತಿ ಇಂದಿಗೂ ನೆನಪಿದೆ ಕಲ್ಲು ಮುಳ್ಳು ಏನು ನೋಡಿಲ್ಲ ....ನಮ್ಮ ಹಿರಿಯರ ಎಲ್ಲರ ಮುಖ ನೋಡೋ ವರಿಗೆ ಸಮಾಧಾನ ಇಲ್ಲ.

ತೇರಿನ ಹತ್ರ ಹೋಗ್ತೀವಿ ...ಜನರ ಚೀರಾಟ ಅಳೋದು ಕೇಳಿ ನಮ್ಮ ಮೈ ಜುಮ್ಮ್ ಅಂತು. ತೇರು ಬಿದ್ದಿದೆ ...ಎಲ್ಲಿದೆ ಅಂತ ಕಾಣಿಸ್ತಾ ಇಲ್ಲ....ಜನರು ಮಾತ್ರ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿಗೆ ಓಡ್ತಾ ಇದಾರೆ....ಧೂಳು, ಭಯ ಇಸ್ಟೇ ನಮಗೆ ನೋಡೋಕೆ ಸಿಕ್ಕಿದ್ದು. ಏನ್ ಮಾಡೋದು ತಿಳಿತಾ ಇಲ್ಲ. ಅಷ್ಟ್ರಲ್ಲಿ ನನಿಗೆ ತೆರಿನ ಗೋಪುರ ಕಾಣಿಸ್ತು ...ನಾನು ಆ ಕಡೆ ಜನರನ್ನು ತಳ್ತಾ ಓಡಿದೆ...ನಮ್ಮ ಅಣ್ಣಂದಿರು ನನ್ನ ಹಿಂದೆ ಬಂದ್ರು. ಹತ್ರ ಹೋಗಿ ನೋಡ್ತೀವಿ ..ತೇರಿನ ನಾಲ್ಕು ಗಾಲಿಗಳು ನೆಲದ ಮೇಲೆ ಮಲಗಿವೆ....೧೫-೨೦ ಜನರು ತೇರನ್ನು ಮೇಲೆ ಎತ್ತಲು ಪ್ರಯತ್ನಿಸ್ತಾ ಇದ್ರೂ. ಆಗ ತಿಳಿದದ್ದು, ತೆರಿ ಕೆಳಗಡೆ ಯಾರು ಸಿಕ್ಕಿ ಹಾಕಿ ಕೊಂಡಿರೋದು. ನಾವು ಅನಕೊಂಡ ಹಾಗೆ ಹಾನಿ ಆಗಿರಲಿಲ್ಲ. ಆದ್ರೆ ನಮ್ಮ ಆತಂಕ ಇನ್ನು ಕಮ್ಮಿ ಆಗಿರಲಿಲ್ಲ ....ಇನ್ನು ತಂದೆ ತಾಯಿ ಮುಖ ನೋಡಿರಲಿಲ್ಲ . ಅಷ್ಟ್ರಲ್ಲಿ ತೇರಿನ ಕೆಳಗಡೆ ಇಂದ ಒಬ್ರನ್ನು ಎಳೆದು ತಗದ್ರು. ಮೈ ಮೇಲಿಂದ ಹೆಚ್ಚು ಪೆಟ್ತಾಗಿರೋದು ಕಾಣಿಸ್ತಾ ಇರ್ಲಿಲ್ಲ ಅವರಿಗೆ. ಇನ್ನು ಜನ ಇದಾರೆ ಕೆಳಗಡೆ ಅಂತ ಕೆಲವರು. ಅಲ್ಲೇ ನಿಂತ ನಾನು ನೋಡಿದ ಹಾಗೆ ತೇರು ಮುಂದಕ್ಕೆ ಉರುಳಿದೆ ...ನಮ್ಮ ಹಿರಿಯರು ತೇರಿನ ಹಿಂದೆ ಇರ್ತಾರೆ ಅಂತ ಅನ್ಕೊಂಡು ಸಮಾಧಾನ ಪಟ್ಟೆ.

ಅಸ್ಟರಲ್ಲಿ ಇನ್ನು ಯಾರು ಇಲ್ಲ ತೇರಿನ ಕೆಳಗೆ ಅಂತ ಹೇಳಿದ ಮೇಲೆ ನಾವೆಲ್ಲ ಸಂತೋಷ ಪಟ್ವಿ. ಆದ್ರೆ ಎಲ್ಲಿ ಇದಾರೆ ನಮ್ಮೋರು ಅನ್ನೋದೇ ತಿಳೀತಿಲ್ಲ. ಅಸ್ಟರಲ್ಲಿ ನಮ್ಮ ತಂದೆ ಆ ಕಡೆ ಇಂದ ಬರೋದು ನೋಡಿದಾಗ ಜೀವ ಬಂದ ಹಾಗಾಯ್ತು. ಓಡಿ ಹೋಗಿ ಎಲ್ಲರೂ ಎಲ್ಲಿ ಅಂತ ಕೇಳ್ದೆ ....ಅವರೆಲ್ಲ ದೂರದಲ್ಲಿ ಮನೆ ಕಡೆ ಹೋಗ್ತಾ ಇರೋದನ್ನ ನಮ್ಮ ತಂದೆ ತೋರ್ಸಿದ್ರು. ಅಬ್ಬ ಎಲ್ಲರನ್ನು ದೂರದಿಂದ ನೋಡಿದಾಗಲೇ ಸಮಾಧಾನ ಆಗಿ ಕಣ್ಣಲ್ಲಿ ನೀರು ಬಂತು.

ಆ ದಿನವನ್ನು ಮರಯಲು ಪ್ರಯತ್ನ ಪಟ್ಟೆ, ಆದ್ರೆ ಸಾಧ್ಯವಾಗಿಲ್ಲ. ಅಂದು ತೇರಿನ ಕೆಳಗಡೆ ಸಿಕ್ಕಿ ಹಕೊಂಡಿದ್ದವರು ನಮಗೆ ಪರಿಚಿತರು ...ಹೆಸರು ಎರ್ರಿಸ್ವಾಮಿ, ೨೪-೨೫ ವಯಸ್ಸು ....ತಾತನ ಹೆಸರೇ ಅವರದು ಆದ್ರೆ ವಿಧಿ ನೋಡಿ ...ಅವರ ಜೀವ ತಾತನ ತೇರಿನ ಕರಣ ೪-೫ ದಿನದ ನಂತರ ಹೋಯಿತು. ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಅವರ ಸ್ಥಿತಿ ಚಿಂತಾಜನಕ ಆಗಿತ್ತು ಅವರನ್ನು ಬೆಂಗಳೂರಿಗೆ ಅಮ್ಬುಲೆನ್ಸೆ ಹತ್ತಿಸ್ವಾಗ ನಾನು ಅಲ್ಲೇ ಇದ್ದೆ. ಆದ್ರೆ ಅವರು ದಾರಿಯಲ್ಲೇ ತೀರಿಹೋದರು ಅಂತ ಸುದ್ದಿ ಬಂತು.

೭೫ ನೆ ವಾರ್ಷಿಕೋತ್ಸವಕ್ಕೆ ಹೀಗೆ ಆಯಿತಲ್ಲ ಅಂಥ ಇಂದಿಗೂ ಎಲ್ಲರಿಗೂ ಬೇಜಾರು.

2 comments:

Mithresh said...

ಅಶೋಕ್, ನಿಮ್ಮ ಆಘಾತ ಚೆನ್ನಾಗಿ ವರ್ಣಿಸಿದ್ದೀರ. ಆ ಕ್ಷಣಗಳು ನಿಜವಾಗಲೂ ಮರೆಯೊಕ್ಕೆ ಆಗಲ್ಲ.

ಸ್ವಲ್ಪ ತಿದ್ದುಪಡಿ ಇದೆ. ಒಂದು ಕಡೆ "ನಮ್ಮ ಮನೆಯ ಮಡದಿಯರು" ಅಂತ ಬರೆದಿದ್ದೀರಿ. ಅದನ್ನು "ನಮ್ಮ ಮನೆಯ ಮುತ್ತೈದೆಯರು" ಅಂದರೆ ಸರಿಯಾಗುತ್ತೆ.

ದೀಪಕ said...

ಅಶೋಕ್,

ನಿನ್ನ ಮೊದಲ ಕನ್ನಡ ಲೇಖನ ಸೊಗಸಾಗಿದೆ. ಇ೦ತಹ ಘಟನೆಗಳು ನಿನ್ನ ಜೀವನದಲ್ಲಿ ಮರುಕಳಿಸದಿರಲೆ೦ದು ಗಣೇಶನಲ್ಲಿ ಕೋರಿಕೊಳ್ಳುತ್ತೇನೆ.
ನಿನ್ನ ಬ್ಲಾಗುದಾರಿಗೆ ಹೀಗೆಯೇ ಮು೦ದುವರೆಯಲಿ.

ಇ೦ತಿ,

ದೀಪಕ